ಐಲಾಂಥಸ್ ಚಿಟ್ಟೆ: ನಾಕ್ಟೂಯಿಡೆ ಕುಲಕ್ಕೆ ಸೇರಿದ ಎಲಿಗ್ಮಾ ನಾರ್ಸಿಸಸ್ ಎಂಬ ವೈಜ್ಞಾನಿಕ ಹೆಸರಿನ ಒಂದು ಚಿಟ್ಟೆ. ದೇವಲೋಕದ ಮರ ಎಂಬ ಹೆಸರು ಗಳಿಸಿ ಬಹಳ ಎತ್ತರವಾಗಿ ಬೆಳೆಯುವ ಐಲಾಂಥಸ್ ಎಕ್ಸೆಲ್ಸ ಎಂಬ ಮರದ ಎಲೆಗಳನ್ನು ತಿಂದು ಹಾಳುಮಾಡುವ ಈ ಚಿಟ್ಟೆಗಳನ್ನು ಆ ಮರದ ಹೆಸರಿಂದಲೇ ಕರೆಯಲಾಗಿದೆ. ಆಕಾರದಲ್ಲಿ ಇದು ದೊಡ್ಡದು; ಬಣ್ಣ ಹಳದಿ; ರೆಕ್ಕೆಗಳ ಮೇಲೆ ಕಂದು ಅಥವಾ ಕಪ್ಪು ಪಟ್ಟೆಗಳಿವೆ. ಮರಿಗಳು ಉದ್ದವಾಗಿದ್ದು ಅವುಗಳ ಮೈಮೇಲೆ ತೆಳುವಾಗಿ ಕೂದಲು ಆವರಿಸಿರುತ್ತದೆ. ಅಲ್ಲಲ್ಲಿ ಕೆಂಪು ಮತ್ತು ಕಪ್ಪು ಪಟ್ಟೆಗಳಿರುತ್ತವೆ. ಮರಿಯ ತಲೆಯ ಬಣ್ಣ ಹಳದಿ. ಇವು ಕೊಂಬೆಗಳ ಮೇಲೆ, ಮಾಸಲು ಹಳದಿ ಬಣ್ಣದ ತೆಳುದಾರದ ಗೂಡು ಕಟ್ಟಿ ಕೋಶಾವಸ್ಥೆ ಹೊಂದುತ್ತವೆ.                                                          (ಟಿ.ಎಸ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ